ಕಬಿಂಡ : ಕಾಂಗೋ ನದಿಮುಖದ ಭೂಮಿಯ ಉತ್ತರದಲ್ಲಿ ಆಫ್ರಿಕದ ಪಶ್ಚಿಮ ತೀರದಲ್ಲಿರುವ ಒಂದು ಪೋರ್ಚುಗೀಸ್ ವಸಾಹತು. ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರವೂ ಉಳಿದ ಕಡೆಗಳಲ್ಲಿ ಕಾಂಗೋ ಗಣರಾಜ್ಯವೂ ಇವೆ. ಕಬಿಂಡದ ಕರಾವಳಿಯ ಉದ್ದ 90 ಕಿಮೀ. ಈ ಪ್ರದೇಶದ ಗರಿಷ್ಠ ಅಗಲ 112 ಕಿಮೀ. ವಿಸ್ತೀರ್ಣ 7,279 ಕಿಮೀ. ಇವರಲ್ಲಿ 1,992 ಮಂದಿ ಐರೋಪ್ಯರೂ 634 ಮಿಶ್ರ ಜನಾಂಗದವರೂ ಇದ್ದಾರೆ. ಆಡಳಿತ ದೃಷ್ಟಿಯಿಂದ ಕಬಿಂಡ ಆಂಗೋಲದ ಒಂದು ಪ್ರಾಂತ್ಯ. ಕಾಂಗೋ ನದಿಯೂ ಕಾಂಗೋ ಗಣರಾಜ್ಯದ ಒಂದು ತುಣುಕೂ ಇದನ್ನು ಆಂಗೋಲದಿಂದ ಪ್ರತ್ಯೇಕಿಸಿವೆ. ಇದರಲ್ಲಿ ಕಬಿಂಡ, ಕಕಾಂಗೋ, ಮಯೊಂಬೆ ಎಂಬ ವಿಭಾಗಗಳಿವೆ. ಕಬಿಂಡದ ಜನ ಬಂಟು ನೀಗ್ರೋಗಳು. ಕಬಿಂಡರೆಂದೇ ಇವರನ್ನು ಕರೆಯುತ್ತಾರೆ. ಈ ಜನ ಬುದ್ಧಿವಂತರು, ಸಮರ್ಥರು, ಚತುರರು, ಕೆಚ್ಚಿನ ನಾವಿಕರೆಂದೂ ಒಳ್ಳೆಯ ವ್ಯಾಪಾರಿಗಳೆಂದೂ ಹೆಸರು ಗಳಿಸಿದ್ದಾರೆ. ಮಯೊಂಬೆ ಅರಣ್ಯ ಸಂಪತ್ಸಮೃದ್ಧವಾದದ್ದು. ಇದು ಪ್ರವಾಸಿಗಳ ಸ್ವರ್ಗ. ಸಾರಿಗೆಯದೇ ತೊಂದರೆ.

ಕಬಿಂಡದ ಮುಖ್ಯ ಉತ್ಪನ್ನಗಳು ಕಾಫಿ, ಕೋಕೋ, ತಾಳೆ ಎಣ್ಣೆ, ಮತ್ತು ತಿರುಳು ಮತ್ತು ಮರದ ದಿಮ್ಮಿ. ರಬ್ಬರ್ ಮತ್ತು ಹಣ್ಣುಗಳ ಉತ್ಪಾದನೆಗೂ ಹೆಚ್ಚು ಅನುಕೂಲವುಂಟು. ದಂತವೂ ಧಾರಾಳವಾಗಿ ದೊರಕುತ್ತದೆ. ಮಣ್ಣಿನಿಂದ ಚಿನ್ನ ತೆಗೆಯಲಾಗುತ್ತದೆ. ಇಲ್ಲಿಯ ಖನಿಜಸಂಪತ್ತಿನಲ್ಲಿ ಅಮೆರಿಕನ್ ಕಂಪನಿಗಳಿಗೆ ಬಹಳ ಆಸಕ್ತಿಯುಂಟು. 1957ರಲ್ಲಿ ಪೆಟ್ರೋಲ್ ತೆಗೆಯಲು ಒಪ್ಪಂದ ಮಾಡಿಕೊಳ್ಳಲಾಯಿತು. ಇಲ್ಲಿಯ ಮುಖ್ಯಪಟ್ಟಣ ಮತ್ತು ಬಂದರು ಕಬಿಂಡ-ಬಿಲಿ ಎಂಬ ಸಣ್ಣ ನದಿಯ ಬಲದಂಡೆಯ ಮೇಲಿದೆ.        (ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ